ಚನ್ನಂಗಿ

ಲೆಗ್ಯೂಮಿನೋಸೀ ಕುಟುಂಬದ ಫ್ಯಾಬೇಸೀ (ಪ್ಯಾಪಿಲಿಯೋನೇಸೀ) ಉಪಕುಟುಂಬಕ್ಕೆ ಸೇರಿದ ಒಂದು ಧಾನ್ಯಸಸ್ಯ. ಲೆನ್ಸ್ ಕ್ಯುಲಿನಾರಿಸ್ ಇದರ ಶಾಸ್ತ್ರೀಯ ಹೆಸರು. ಇಂಗ್ಲಿಷಿನಲ್ಲಿ ಲೆಂಟಿಲ್ ಎಂದು ಕರೆಯಲಾಗುತ್ತದೆ. ಇದು 15-17 ಛಿm. ಎತ್ತರಕ್ಕೆ ಬೆಳೆಯುವ ಸಣ್ಣ ಮೂಲಿಕೆ. ಗಿಡ ಮೇಲೆ ಮೃದುವಾದ ರೋಮಗಳಿವೆ. ಎಲೆಗಳು ಸಂಯುಕ್ತ ರೀತಿಯವು. ಹೂಗಳು ಬಿಳಿ, ಗುಲಾಬಿಹೂ, ಕೆಂಪು ಅಥವಾ ಕೆನ್ನೀಲಿ ಬಣ್ಣದವು. ಫಲ ಪಾಡ್ ಮಾದರಿಯದು. ಒಳಗೆ ಎರಡು ಬೀಜಗಳಿವೆ. ಬೀಜಗಳ ಬಣ್ಣ ನಸುಪಾಟಲದಿಂದ ಪ್ರಷ್ಯನ್ ಕೆಂಪಿನವರೆಗೆ ವ್ಯತ್ಯಾಸವಾಗುತ್ತದೆ. 			(ಜಿ.ಆರ್.ಎಸ್.)

ಬಹಳ ಹಿಂದಿನಿಂದಲೂ ಚನ್ನಂಗಿ ಒಂದು ಉತ್ತಮ ಆಹಾರಧಾನ್ಯವೆನಿಸಿಕೊಂಡಿದೆ. ಏಸ್ಯಮೈನರ್, ಗ್ರೀಸ್ ಇಲ್ಲವೆ ಈಜಿಪ್ಟ್ ಇದರ ತವರು ಎಂದು ಹೇಳಲಾಗಿದೆ. ಸ್ಪೇನ್, ಫ್ರಾನ್ಸ್, ಇಟಲಿ, ಗ್ರೀಸ್, ಈಜಿಪ್ಟ್, ಆಲ್ಜೀರಿಯ, ಇಥಿಯೋಪಿಯ, ಜಾರ್ಡನ್, ಸಿರಿಯ, ತುರ್ಕಿ, ಭಾರತ, ಪಾಕಿಸ್ತಾನಗಲ್ಲಿ ಇದನ್ನು ಬೆಳೆಸುತ್ತಾರೆ. ಪ್ರಪಂಚದ ಬೇರಾವ ದೇಶಗಳಿಗಿಂತಲೂ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಇದರ ಬೇಸಾಯ ಹೆಚ್ಚು. ಇತ್ತೀಚೆಗೆ ಚಿಲಿ, ಅರ್ಜೆಂಟೀನಗಳಲ್ಲೂ ಉತ್ತರ ಅಮೆರಿಕದಲ್ಲೂ ಚನ್ನಂಗಿಯನ್ನು ಬೆಳೆಸಲು ಆರಂಭಿಸಿದ್ದಾರೆ. ಭಾರತದಲ್ಲಿ ಇದರ ಬೇಸಾಯ ಬಹಳ ಹಿಂದಿನಿಂದ ಇದೆಯಾದರೂ ಉತ್ತರ ಭಾರತದಲ್ಲಿ ಮಾತ್ರ ಇದು ಜನಪ್ರಿಯವಾಗಿದೆ. ಭಾರತದಲ್ಲಿ ಒಟ್ಟು 52,000 ಹೆಕ್ಟೇರಿಗೂ ಹೆಚ್ಚು ಪ್ರದೇಶದಲ್ಲಿ ಇದರ ಬೆಳೆ ಉಂಟು. ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಬಂಗಾಳ, ಪಂಜಾಬ್ ರಾಜ್ಯಗಳು ಚನ್ನಂಗಿ ಬೇಸಾಯಕ್ಕೆ ಪ್ರಸಿದ್ಧವಾಗಿವೆ. ಚನ್ನಂಗಿಯನ್ನು ದೊಡ್ಡ ಗಾತ್ರದ ಬೀಜದವು (ಮ್ಯಾಕ್ರೊಸ್ಪರ್ಮೀ) ಮತ್ತು ಚಿಕ್ಕಗಾತ್ರದ ಬೀಜದವು (ಮೈಕ್ರೊಸ್ಪರ್ಮಿ) ಎಂಬ ಎರಡು ಉಪಪ್ರಭೇದಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಬಗೆಯದನ್ನು ಆಫ್ರಿಕ ಮತ್ತು ಮೆಡಿಟರೇನಿಯನ್ ದೇಶಗಳಲ್ಲೂ ಎರಡನೆಯದನ್ನು ಪಶ್ಚಿಮ ಹಾಗೂ ನೈಋತ್ಯ ಏಷ್ಯದ ದೇಶಗಳಲ್ಲೂ ಬೆಳೆಸಲಾಗುತ್ತದೆ. ಎರಡನೆಯ ಬಗೆಯಲ್ಲಿ ಅನೇಕ ಭೌಗೋಳಿಕ ರೂಪಗಳಿವೆ. ಎರಡು ಉಪಪ್ರಭೇದಗಳ ಕ್ರೋಮೋಸೋಮು ಸಂಖ್ಯೆ ಒಂದೇ ಆಗಿದ್ದರೂ ಇವೆರಡನ್ನೂ ಅಡ್ಡ  ಹಾಯಿಸಿದಾಗ ಬಂಜೆ ತಳಿಗಳು ಉತ್ಪತ್ತಿಯಾಗುತ್ತವೆ. ಹೂಗಳ ಬಣ್ಣ, ಕಾಯಿಗಳ ಆಕಾರ, ಬೀಜಗಳ ರಚನೆ, ವಿವಿಧ ರೀತಿಯ ಮಣ್ಣು ಹಾಗೂ ವಾತಾವರಣಗಳಿಗೆ ಇವು ತೋರುವ ಹೊಂದಾಣಿಕೆ-ಮುಂತಾದ ಗುಣ ಲಕ್ಷಣಗಳಲ್ಲಿ ಚನ್ನಂಗಿಯ ವಿವಿಧ ಬಗೆಗಳು ಭಿನ್ನತೆಯನ್ನು ಪ್ರದರ್ಶಿಸುತ್ತವೆ.
(ಎಂ.ಬಿ.ಟಿ.)

ಭಾರತದಲ್ಲಿ ಬೆಳೆಯುವ ಚನ್ನಂಗಿ ಬಗೆಗಳನ್ನು ವ್ಯಾಪಾರದೃಷ್ಟಿಯಿಂದಲೂ ದಪ್ಪ ಬೀಜದವು (ಮಸೂರ್ ಅಥವಾ ಮಲ್ಕ ಮಸೂಲ್) ಮತ್ತು ಸಣ್ಣ ಬೀಜದವು (ಮಸ್ತಿ) ಎಂಬ ಎರಡು ಮುಖ್ಯ ಗುಂಪುಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಸುಮಾರು 66 ವಿವಿಧ ರೀತಿಯ ಶುದ್ಧತಳಿಗಳನ್ನು ಗುರುತಿಸಿರುವುದುಂಟು. ಇವುಗಳ ಹೂವಿನ ಬಣ್ಣ, ಬೀಜಗಳ ಬಣ್ಣ, ಗಾತ್ರ ಹಾಗೂ ಗುರುತುಗಳು, ಹೂ ಅರಳುವ ಕಾಲ, ಎಲೆ ಹಾಗೂ ಕಾಂಡಗಳ ಬಣ್ಣ, ಸಸ್ಯರೂಪ-ಮುಂತಾದ ಲಕ್ಷಣಗಳಲ್ಲಿ ವ್ಯತ್ಯಾಸಗಳಿವೆ. ಭಾರತದ ಬಗೆಗಳಲ್ಲಿ ಮುಖ್ಯವಾದವು ಎನ್.ಪಿ. 11, ಎನ್.ಪಿ. ಹೈಬ್ರಿಡ್ 1, ಟೈಪ್ 3, ಟೈಪ್ 36, ನಂ. 15 ಮತ್ತು ನಂ. 20 ಮುಖ್ಯವಾಗಿವೆ. ಇವುಗಳಲ್ಲಿ ಟೈಪ್ 3 ಮತ್ತು ಟೈಪ್ 36 ಇಳುವರಿಯ ಮೊತ್ತ ದೃಷ್ಟಿಯಿಂದ ಪ್ರಮುಖವೆನಿಸಿವೆ.
ಬೇಸಾಯ : ಭಾರತದಲ್ಲಿ ಚನ್ನಂಗಿಯನ್ನು ಸಮುದ್ರಮಟ್ಟದಿಂದ ಹಿಡಿದು 3,500 m. ಎತ್ತರದ ಬೆಟ್ಟಪ್ರದೇಶಗಳ ವಿವಿಧ ರೀತಿಯ ವಾಯು ಪರಿಸ್ಥಿತಿಗಳಲ್ಲಿ ಬೆಳೆಸಲಾಗುತ್ತದೆ. ಚನ್ನಂಗಿಗೆ ವಿವಿಧ ಬಗೆಯ ಮಣ್ಣುಗಳಿಗೆ ಹೊಂದಿಕೊಂಡು ಬೆಳೆಯಬಲ್ಲ ಸಾಮಥ್ರ್ಯವೂ ಇದೆ. ಉತ್ತರಭಾರತದ ಮೆಕ್ಕಲು ಭೂಮಿಯಲ್ಲಿ ಬೆಳೆದಷ್ಟು ಹುಲುಸಾಗಿ ದಕ್ಷಿಣ ಭಾರತದ ಎರಮಣ್ಣಿನಲ್ಲೂ ಪಂಜಾಬಿನ ಕೆಳಮಟ್ಟದ ಪ್ರದೇಶಗಳಾದ ಸಾಯ್ಲಾಬಗಳಲ್ಲೂ ಇದು ಬೆಳೆಯಬಲ್ಲದು. ಸಾಮಾನ್ಯವಾಗಿ ಚನ್ನಂಗಿ ಚಳಿಗಾಲದ ಬೆಳೆ (ಬಿತ್ತನೆಯ ಕಾಲ ಆಕ್ಟೋಬರ್-ನವೆಂಬರ್). ಇದನ್ನು  ಬಾರ್ಲಿ, ಸಾಸಿವೆ ಅಥವಾ ಹರಳುಗಳೊಂದಿಗೆ (ಔಡಲ) ಮಿಶ್ರಬೆಳೆಯಾಗಿ ಬೆಳೆಸುವುದಿದೆ. ಭೂಮಿಯನ್ನು ಆಳವಾಗಿ ಉಳಬೇಕಾಗಿಲ್ಲ. ಬೀಜಗಳನ್ನು ಸುಮ್ಮನೆ ಚೆಲ್ಲುತ್ತಾರೆ. ಇಲ್ಲವೆ ಸಾಲುಗಳಲ್ಲಿ ಬಿತ್ತುತ್ತಾರೆ. ಬಿತ್ತನೆಯ ರೀತಿಯನ್ನು ಅನುಸರಿಸಿ ಒಂದು ಎಕರೆಗೆ ಸು. 10-40 ಞg. ಬೀಜ ಬೇಕಾಗುತ್ತದೆ. ಸುಮಾರು 3 ಳಿ ತಿಂಗಳ ಅನಂತರ ಫಸಲು ಕುಯ್ಲಿಗೆ ಬರುತ್ತದೆ. ಗಿಡಗಳನ್ನು ನೆಲದ ಮಟ್ಟಕ್ಕೆ ಕತ್ತರಿಸಿ ಇಲ್ಲವೆ ಬೇರುಸಹಿತ ಕಿತ್ತು, ಕಂತೆಕಟ್ಟಿ ಒಣಗಿಸಲಾಗುತ್ತದೆ. ಆಮೇಲೆ ಬಡಿದು ಕಾಳುಗಳನ್ನು ಬೇರ್ಪಡಿಸಲಾಗುತ್ತದೆ.

ಚನ್ನಂಗಿಯ ಎಕರೆವಾರು ಇಳುವರಿ ಬೇಸಾಯಕ್ರಮಗಳನ್ನು ಅವಲಂಬಿಸಿ 140ಞg. ಯಿಂದ 340 ಞg. ಯವರೆಗೆ ವ್ಯತ್ಯಾಸವಾಗುತ್ತದೆ. ಚನ್ನಂಗಿಯನ್ನು ಶುದ್ಧಬೆಳೆಯಾಗಿ ಇಲ್ಲವೆ ನೀರಾವರಿ ಬೆಳೆಯಾಗಿ ಬೆಳೆಸಿದಾಗ ಇಳುವರಿ ಹೆಚ್ಚಾಗಿಯೂ ಮಿಶ್ರಬೆಳೆಯಾಗಿ ಅಥವಾ ಖುಷ್ಕಿ ಜಮೀನಿನ ಬೆಳೆಯಾಗಿ ಬೇಸಾಯ ಮಾಡಿದಾಗ ಇಳುವರಿ ಕಡಿಯಮೆಯಾಗಿಯೂ ಇರುತ್ತದೆ. ಹೆಚ್ಚು ಇಳುವರಿ ಕೊಡುವ ಬಗೆಗಳನ್ನು ಬೆಳೆಸಿದಾಗ ಉತ್ಪನ್ನದ ಮೊತ್ತ ಸಹಜವಾಗಿಯೇ ಹೆಚ್ಚುತ್ತದೆ. ಉದಾಹರಣೆಗೆ ಕಾನ್ಪುರದ ಕೃಷಿ ಸಂಶೋಧನ ಕೇಂದ್ರದಲ್ಲಿ ಬೆಳೆಸಿದ ಟೈಪ್-3 ಬಗೆ ಎಕರೆಗೆ 600 ಞg.  ಇಳುವರಿ ನೀಡಿದೆ. ಮಾರಕವಾದ ರೋಗಗಳಾಗಲೀ ಕೀಟಗಳಾಗಲೀ ಚನ್ನಂಗಿಗೆ ಬರುವುದಿಲ್ಲ. ಯೂರೋಮೈಸಿಸಿಸ್ ಪ್ಯೂಸೇರಿಯಮ್ ಆರ್ತೊಸಿರಾಸ್ ಎಂಬುದರಿಂದ ಉಂಟಾಗುವ ವಿಲ್ಪ್ ರೋಗವು ಲಘು ಪ್ರಮಾಣದಲ್ಲಿ ನಷ್ಟವನ್ನುಂಟುಮಾಡುತ್ತವೆ.

ಉಪಯೋಗಗಳು : ಇಡಿಯ ಕಾಳಿಗಿಂತ ಬೇಳೆಯೇ ಹೆಚ್ಚು ಬಳಕೆಯಲ್ಲಿದೆ. ಬೇಳೆಯನ್ನು ಮುಖ್ಯವಾಗಿ ಸಾರು, ಕಿಚಡಿ ಮುಂತಾದವನ್ನು ತಯಾರಿಸಲು ಉಪಯೋಗಿಸುತ್ತಾರೆ. ಎಳೆಯ ಕಾಯಿಗಳನ್ನು ತರಕಾರಿಯಂತೆ ಬಳಸುವುದಂಟು. ಹಿಟ್ಟನ್ನು ಬಾರ್ಲಿ ಮತ್ತು ಇತರ ಬಗೆಯ ಹಿಟ್ಟು ಹಾಗೂ ಉಪ್ಪಿನೊಂದಿಗೆ ಬೆರೆಸಿ ಪೌಷ್ಠಿಕ ಆಹಾರವೊಂದನ್ನು ತಯಾರಿಸಿ ಉಪಯೋಗಿಸುವ ಕ್ರಮ ಯೂರೋಪಿನಲ್ಲಿದೆ. ಚನ್ನಂಗಿಯಲ್ಲಿ ಅಧಿಕ ಪರಿಮಾಣದ ಪ್ರೋಟೀನ್ ಉಂಟು. ಕೆಲವು ಬಗೆಗಳಲ್ಲಿ ಪ್ರೋಟೀನು ಮೊತ್ತ ಸು. 30% ವರೆಗೂ ಇರುವುದುಂಟು. ಚನ್ನಂಗಿಯ ಪ್ರೋಟೀನಿನಲ್ಲಿ ಅವಶ್ಯಕ ಅಮೈನೋ ಆಮ್ಲಗಳಾದ ಆರ್ಜಿನೀನ್, ಹಿಸ್ಟಿಡೀನ್, ಮೇಥೈಯನೀನ್, ಲೈಸೀನ್, ವ್ಯಾಲೀನ್, ಫೀನೈಲ್ ಅಬಲನೀನ್, ಟ್ರಿಪ್ಟೋಫ್ಯಾನ್, ಲ್ಯೂಸಿನ್, ಐಸೋಲ್ಯೂಸಿನ್ ಮತ್ತು ಥ್ರಿಯನೀನ್ ಇವೆ. ಬೇರೆ ಬೇಳೆಗಳಂತೆ ಚನ್ನಂಗಿ ಬೇಳೆಯೂ ಮಿಟಮಿನುಗಳ ಉತ್ತಮ ಅಗರ ಎನಿಸಿಕೊಂಡಿವೆ. ಮಿಟಮಿನ್ ಬಿ ಗುಂಪಿಗೆ ಸೇರಿದ ಥೈಯಮೀನ್, ರೈಬೋಫ್ಲೇಮಿನ್, ನಿಕೋಟಿನಿಕ್ ಆಮ್ಲ, ಕೋಲೀನ್, ಪೋಲಿಕ್ ಆಮ್ಲ, ಇನೋಸಿಟಾಲ್, ಬಯೋಟಿನ್, ಪ್ಯಾಂಟಥೆನಿಕ್ ಆಮ್ಲ, ಪಿರಿಡಾಕ್ಸಿನುಗಳೂ ವಿಟಮಿನ್ ಕೆ ಮತ್ತು ಆಸ್ಕಾರ್ಬಿಕ್ ಆಮ್ಲಗಳೂ ಇದರಲ್ಲಿ ಅಧಿಕ ಪರಿಮಾಣದಲ್ಲಿವೆ. ಚನ್ನಂಗಿಯಲ್ಲಿ ಅನೇಕ ಬಗೆಯ ಖನಿಜಗಳು ಉಂಟು. ಕ್ಯಾಲ್ಸಿಯಮ್, ರಂಜಕ, ಕಬ್ಬಿಣ, ಗಂಧಕ, ಕ್ಲೋರೀನ್, ಅಯಡೀನ್, ಬ್ರೋಮೀನ್, ಮ್ಯಾಂಗನೀಸ್, ಅಲ್ಯುಮಿನಿಯಮ್, ತಾಮ್ರ, ಸತು ಮುಂತಾದವು ಮುಖ್ಯವಾಗಿವೆ. ಈ ಎಲ್ಲ ವಸ್ತುಗಳಿಂದಾಗಿ ಚನ್ನಂಗಿ ಒಳ್ಳೆಯ ಪುಷ್ಟಿಕರ ಆಹಾರವೆನಿಸಿದೆ. ಪೌಷ್ಟಿಕ ಮೌಲ್ಯದ ದೃಷ್ಟಿಯಿಂದ ಉದ್ದನ್ನು ಬಿಟ್ಟರೆ ಚನ್ನಂಗಿಯೆ ಪ್ರಮುಖವಾದುದು.

ಚನ್ನಂಗಿ ಬೇಳೆಯುವ ಪಿಷ್ಟವನ್ನು ತೆಗೆಯುವುದೂ ಉಂಟು. ಈ ಪಿಷ್ಟವನ್ನು ಬಟ್ಟೆ ಹಾಗೂ ಕ್ಯಾಲಿಕೊ ಮುದ್ರಣ ಕೈಗಾರಿಕೆಗಳಲ್ಲಿ ಬಳಸುತ್ತಾರೆ. ಪಿಷ್ಟ ತೆಗೆದ ಅನಂತರ ಉಳಿಯುವ ಹಿಂಡಿಯನ್ನೂ ಬೀಜದಿಂದ ಬೇರ್ಪಡಿಸಲಾಗುವ ಹೊಟ್ಟು ಮತ್ತು ಸಿಪ್ಪೆಗಳನ್ನೂ ದನದ ಮೇವಾಗಿ ಬಳಸುವುದುಂಟು. ಚನ್ನಂಗಿಯ ಹೊಟ್ಟು ಗೋಧಿಯ ಹೊಟ್ಟಿಗಿಂದ ಉತ್ತಮವಾದುದೆಂದು ಹೇಳಲಾಗಿದೆ. ಇದೇ ರೀತಿ ಚನ್ನಂಗಿ ಸೊಪ್ಪು ಕೂಡ ದನಕರುಗಳಿಗೆ ಒಳ್ಳೆಯ ಆಹಾರ. ಚನ್ನಂಗಿಯನ್ನು ಭಾರತದ ಕೆಲವೆಡೆ ಹಸಿರು ಗೊಬ್ಬರಕ್ಕಾಗಿ ಬೆಳೆಸುವುದುಂಟು.
(ಜಿ.ಆರ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ